Friday, November 30, 2007

ಹೆಸರಿಲ್ಲದ ಹನಿಗಳು

ಜಗದಂಗಳದ ಜಂಗುಳಿಯಲ್ಲಿ
ಅವನಿಗಾಗಿ ಹುಡುಕಿದೆ,
ಎಲ್ಲರ ಮುಖದಲ್ಲೂ ಕನ್ನಡಿ;
ಕಂಡದ್ದು ನನ್ನದೆ ಮಸುಕು ಬಿಂಬ

~*~*~*~*~

ನಿದ್ದೆ ಬಾರದ ರಾತ್ರಿಯಲಿ
ಮನದ ಸೂರ ತುಂಬೆಲ್ಲಾ
ಧಗಧಗಿಸುವ ನಿನ್ನ ನೆನಪ
ಮಳೆ ನಕ್ಷತ್ರಗಳು...!

~*~*~*~*~

ನೀನು ಸಿಗಲಿಲ್ಲವೆಂದು
ಬೇಸರಿಸಿದೆ, ದುಃಖಿಸಿದೆ,
ನಿನ್ನ ನೆನಪಲ್ಲೇ ಬದುಕಿದೆ!
ಎಲ್ಲಿಯಾದರೂ ನೀನು ದಕ್ಕಿದ್ದರೆ?
ಖುಶಿಯಿಂದ ಸತ್ತೇ ಹೋಗುತ್ತಿದ್ದೆ!

Wednesday, July 4, 2007

ಒಂದಿಷ್ಟು (ಅಸಂಬದ್ಧ!) ಹನಿಗಳು

ವಿಪರೀತ ಹಸಿವೆಂದು
ಸೂರ್ಯನನ್ನು ನುಂಗಿದೆ,
ತಕ್ಷಣ ಮೂಡಿದ ಚಂದ್ರ
ಕಣ್ಣು ಮಿಟುಕಿಸಿದ!

~*~*~

ಕಳೆದದ್ದು ಸಿಕ್ಕಿತೆಂದು
ಕತ್ತಲಲ್ಲಿ ಕೈ ತಡಕಿದೆ
ಏನೂ ಸಿಗದೆ ಕೈ ತೆಗೆದರೆ
ಕೈಗೆಲ್ಲಾ ಹೊಳೆವ ನಕ್ಷತ್ರಗಳು
ಮೆತ್ತಿಕೊಂಡಿದ್ದವು

~*~*~

ಸಾವನ್ನು ಬೆಂಬತ್ತಿ
ಓಡುತ್ತಿದ್ದ ಅವನು
ಹಿಂದಿನಿಂದ ಬಂದ
ಲಾರಿಯಡಿ ಸಿಕ್ಕಿ
ಅಪ್ಪಚ್ಚಿಯಾಗಿಹೋದ

~*~*~

ನೀನು ನೆನಪಾಗದೆ
ವರುಷಗಳೆ ಸಂದವು
ಆದರೂ ಇನ್ನೂ ನೀನೇಕೆ
ಆಗಾಗ ಬಿಕ್ಕಳಿಸುತ್ತಿರುವೆ..!?

~*~*~

ಕಳೆದ ಕಾಲಗಳ ಪುಸ್ತಕ
ತಿರುವುತ್ತಿದ್ದೆ
ಕೆಲವೆಡೆ ರಕ್ತದಲ್ಲಿ ಬರೆದಿತ್ತು
ಹಲವೆಡೆ ಕಣ್ಣೀರಿಂದ ಅಳಿಸಿ ಹೋಗಿತ್ತು

Tuesday, June 12, 2007

ಗುಲಾಬಿ ಗೊಂಚಲು

{ಎಲ್ಲೋ, ಎಂದೋ ಓದಿದ ಹೀಗೊಂದು ಕಥೆ!
ಸದಾ ನನ್ನನ್ನು ಕಾಡುವ ಕಥೆಗಳಲ್ಲಿ ಈ 'ಗುಲಾಬಿ ಗೊಂಚಲು 'ಸಹ ಒಂದು. ಇದನ್ನು ಬರೆದವರು ಯಾರೂ ಎಂದೂ ಸಹ ನನಗೆ ನೆನಪಿಲ್ಲ! ಯಾರೇ ಆಗಲಿ ಆತ ಅದ್ಭುತ ಕತೆಗಾರನಂತು ಹೌದು. ನಿಜ ಹೇಳಬೇಕೆಂದರೆ, ಇದರ ನಿಜವಾದ ಹೆಸರು 'ಗುಲಾಬಿ ಗೊಂಚಲು' ಹೌದೋ ಅಲ್ಲವೋ ನನಗೆ ನೆನಪಿಲ್ಲ. ಆದರೆ ಈ ಹೆಸರು ಇದಕ್ಕೆ ಸೂಕ್ತವೆನಿಸುವುದರಿಂದ ಹಾಗು ಇದು ಹಾಗೆ ನನ್ನ ಮನಸ್ಸಿನಲ್ಲಿ ಉಳಿದುದರಿಂದ ಅದನ್ನೆ ಶೀರ್ಷಿಕೆಯಾಗಿ ಬಳಸಿಕೊಳ್ಳುತ್ತಿದ್ದೇನೆ. ನಿಮಗೂ ಸಹ ಇಷ್ಟವಾಗಬಹುದು ಎಂದೆನಿಸಿ ನಿಮ್ಮಲ್ಲಿ ಹಂಚಿಕೊಳ್ಳುತಿದ್ದೇನೆ.}


ನಿಧಾನ ಗತಿಯಲ್ಲಿ ಬಸ್ಸು ಸಾಗುತ್ತಿತ್ತು. ಬಸ್ಸಿನಲ್ಲಿ ಕೇವಲ ಬೆರಳೆಣಿಕೆಯಷ್ಟು ಜನರು ಮಾತ್ರವೇ ಇದ್ದರು. ಸರಿ ಸುಮಾರು ಬಸ್ಸಿನ ಎಡ ಮಧ್ಯದಲ್ಲಿ ಆ ತುಂಟ ಕಂಗಳ ಸುಂದರ ಹುಡುಗಿ ಕುಳಿತಿದ್ದಳು. ಅವಳ ಕಣ್ಣೋ ಸುತ್ತೆಲ್ಲಾ ಓಡಾಡುತ್ತಿತ್ತು. ಅವಳಿಗಿಂತ ೪-೫ ಸಾಲು ಮುಂದೆ ಬಲಬದಿಯಲ್ಲಿ ನಡುವಯಸ್ಸಿನ ಆತ ಕುಳಿತಿದ್ದ. ಎಲ್ಲೆಡೆ ಹರಿದಾಡುತ್ತಿದ್ದ ಅವಳ ದೃಷ್ಟಿ ತಟ್ಟನೆ ಅವನ ಕೈಲಿದ್ದ ಸುಂದರ ಗುಲಾಬಿ ಗೊಂಚಲಿನಲ್ಲಿ ನಿಂತತು. ಗುಲಾಬಿ ಎಂದರೆ ಜಗವನ್ನೇ ಮರೆಯುವ ಅವಳಿಗೆ ಅಷ್ಟೊಂದು ಚಂದದ ಗುಲಾಬಿ ಗೊಂಚಲಿನಿಂದ ಕಣ್ಣನ್ನು ಕೀಳಲಾಗಲೆ ಇಲ್ಲ. ಅನ್ಯಮನಸ್ಕನಾಗಿ ಕುಳಿತಿದ್ದ ಆತ ಫಕ್ಕನೆ ಅವಳನ್ನು ಗಮನಿಸಿದ. ಅವಳು ಗುಲಾಬಿಯನ್ನು ಆಸೆಯ ಕಣ್ಣುಗಳಿಂದ ನೋಡುತ್ತಿರುವುದು ಅವನ ಅರಿವಿಗೆ ಬಂತು. ಕ್ಷಣಕಾಲ ತದೇಕ ಚಿತ್ತದಿಂದ ಗೊಂಚಲನ್ನು ನೋಡಿದ. ನಂತರ ಏನೋ ನಿರ್ಧರಿಸದಂತೆ ತನ್ನ ಸೀಟಿನಿಂದೆದ್ದು ಅವಳ ಬಳಿಗೆ ಬಂದು ನಿಂತ. ಬಲಗೈಯಲ್ಲಿದ್ದ ಗೊಂಚಲನ್ನು ಅವಳತ್ತ ಚಾಚಿದ. ಅವಳು ಒಮ್ಮೆಲೆ ಅವಕ್ಕಾದಳು. ಏನು ಮಾಡಬೇಕೆಂದು ತೋಚದೆ ಒಂದರೆ ಕ್ಷಣ ಗಲಿಬಿಲಿಗೊಂಡಳು, ತೆಗೆದು ಕೊಳ್ಳಲೆ ಬೇಡವೆ ಎಂದು ಯೋಚಿಸುತ್ತಿರುವಾಗಲೆ, ಶಾಂತಚಿತ್ತ ಸ್ವರದಲ್ಲಿ ಆತನೆಂದ "ತೆಗೆದುಕೋ ಪರವಾಗಿಲ್ಲ, ನನ್ನ ಹೆಂಡತಿಗೆಂದು ತೆಗೆದು ಕೊಂಡು ಹೋಗುತ್ತಿದ್ದೆ. ಗುಲಾಬಿಯನ್ನು ಬಹಳ ಇಷ್ಟ ಪಡುವ ಹುಡುಗಿಯೊಬ್ಬಳಿಗೆ ಕೊಟ್ಟೆ ಎಂದರೆ ಅವಳೇನು ಬೇಜಾರು ಮಾಡಿ ಕೊಳ್ಳೋದಿಲ್ಲ. ಯೋಚಿಸಬೇಡ ತಗೋ." ಎಂದನು . ಬೇಡವೆಂದರೂ ತನಗರಿವಿಲ್ಲದೆ, ಅವನ ಕೈಯಿಂದ ಹೂ ಗೊಂಚಲನ್ನು ಪಡೆದವಳ ಮುಖದಲ್ಲಿ ಭಯಾಶ್ಚಾರ್ಯಗಳ ಸಂತಸದ ಹೊನಲು! ಕೃತಜ್ಞತೆಯ ಹೊಳಪು ಆಕೆಯ ಕಣ್ಗಳಲ್ಲಿ. ಆತ ಇದೆಲ್ಲದರ ಅರಿವಿಲ್ಲದವನಂತೆ, ತಾನು ಬಂದ ಕೆಲಸವಾಯಿತೆಂದು ನಿರಮ್ಮಳನಾಗಿ ತನ್ನ ಜಾಗಕ್ಕೆ ಹಿಂತಿರುಗಿದ. ಎರಡೂ ಕೈಗಳಲ್ಲಿ ಹೂಗಳನ್ನು ಹಿಡಿದು ಪ್ರಪಂಚದ ಅರಿವಿಲ್ಲದಂತೆ ಧನ್ಯ ಭಾವದಿಂದ ಮೂಕವಾಗಿ ನೋಡುತ್ತಿದ್ದವಳಿಗೆ, ಬಸ್ಸು ನಿಧಾನಗೊಂಡು ಗಕ್ಕನೆ ನಿಂತಾಗ ವಾಸ್ತವದ ಅರಿವಾಯಿತು. ತಲೆ ಎತ್ತಿ ನೋಡಿದಾಗ ಆತ ಇಳಿಯಲು ಅನುವಾಗುತ್ತಿದ್ದುದು ಕಂಡಿತು. "ಛೆ !ಒಂದು ಥ್ಯಾಂಕ್ಸ್ ಸಹ ಹೇಳದೇ ಹೋದೆನಲ್ಲ ನಾನೆಂತವಳು " ಎಂದು ತನ್ನ ಮರೆವಿಗೆ ತಾನೆ ಹಳಿದು ಕೊಳ್ಳುವಾಗಲೆ ಆತ ಇಳಿದಾಗಿತ್ತು. ಆತ ಎಲ್ಲಿ ಹೋಗುತ್ತಾನೆ ಎಂದು ಕುತೂಹಲದಿಂದ ಆಕೆ ಬಸ್ಸಿನ ಕಿಟಕಿ ಯಿಂದ ಕಣ್ಣು ಹಾಯಿಸಿದಳು. ಬಸ್ಸಿನಿಂದಿಳಿದ ಆತ ನಿಧಾನವಾಗಿ ಹತ್ತಿರವೇ ಇದ್ದ ಸ್ಮಶಾನದೆಡೆಗೆ ಹೆಜ್ಜೆ ಹಾಕುತ್ತಿದ್ದ, ತನ್ನ ಹೆಂಡತಿಯ ಸಮಾಧಿಯೆಡೆಗೆ...!

Monday, May 7, 2007

ಸಾಸಿವೆ

ಇದ್ದಕಿದ್ದಂತೆ ಎದೆ ಹಿಡಿದು
ನೆಲಕ್ಕೊರಗಿದರು ತೇಜಸ್ವಿ ,
ಶಾಲೆಯಿಂದ ಹೊರಟ ಕಂದ
ಬಸ್ಸ ಹೊಡತಕ್ಕೆ ಉತ್ತರಿಸದಾಯಿತು,
ಎಲ್ಲವನ್ನೂ ಎತ್ತಿ ಎಸೆಯುವ ನೀನು
ಸಾವಿನ ಎದುರು ತರಗೆಲೆಯಾಗಿರುವೆಯಲ್ಲ!?
ಬುದ್ಧನಿಗೆಂದು ಸಿಕ್ಕೀತು ಒಗ್ಗರಣೆಗೊಂದಿಷ್ಟು
ಸಾಸಿವೆ!!?


Wednesday, May 2, 2007

ವಾಸ್ತವತೆ

ಕತ್ತಲೆಯು ಕಾಣದ ಕಣ್ಣುಗಳ
ಕೇವಲ ಕುರುಡು ಕಲ್ಪನೆಯಷ್ಟೆ!
ಕಂಡದ್ದೆಲ್ಲವನ್ನು ಕುಡಿದು ಕುಪ್ಪಳಿಸುವ
ಬೆಳಕು ಎಂದಾದರೂ ಬಳಲೀತೆ!?

ಕಂಡ ಕಂಡಲ್ಲೆಲ್ಲಾ ಸುಳ್ಳನ್ನು ಬಿತ್ತಿ,
ಹಣವನ್ನು ಹನಿಸಿ ಹುಸಿ ಹೂವ ಹುಟ್ಟಿಸಿ,
ಕಾಯಿ ಕಟ್ಟಿಸಿದರೂ ಸತ್ಯವೆಂದಾದರೂ
ಸಹಿಸಿ ಸುಮ್ಮನಾದೀತೆ!?

Saturday, April 14, 2007

ಸಾಂತ್ವಾನ

ದುಃಖಿಸ ಬೇಡ ಗೆಳತಿ,
ಮರೆಯಲು ಪ್ರಯತ್ನಿಸು
ಮುಚ್ಚಿದ ಹಳೆಯ ಬಾಗಿಲನ್ನು
ವೃಥಾ ನೂಕಿ ಶ್ರಮ ಪಡಬೇಡ
ಅಲ್ಲಿರುವುದು ನಿನ್ನ ಕನಸುಗಳ ಪಳೆಯುಳಿಕೆಗಳು,
ಅರಳುವ ಮೊದಲೇ ಮುರುಟಿದ ಮೊಗ್ಗುಗಳು,
ಅಕ್ಷರವೇ ಇಲ್ಲದೆ ಹಾಳು ಬಿದ್ದ ಖಾಲಿ ಹಾಳೆಗಳು,
ಕತ್ತಲನ್ನು ಮರೆಯಲು ಪ್ರಯತ್ನಿಸು,
ಬದುಕಿನತ್ತ ಮುಖ ತಿರುಗಿಸು,
ಒಡೆದ ಕನ್ನಡಿಯನ್ನು ಆಯಬೇಡ,
ಕೈಗೆ ಚುಚ್ಚಿ ಗಾಯವಾದೀತು, ಜೋಕೆ!
ಅವು ಅಲ್ಲೆ ಕರಗಲಿ ಬಿಡು
ಎದುರಿನ ಹೊಸ ಬಾಗಿಲನ್ನು ಸರಿಯಾಗಿ ದಿಟ್ಟಿಸು,
ಶ್ರದ್ಧೆಯಿರಲಿ, ಅದೇ ಕನ್ನಡಿಯಾದೀತು,
ನಿನ್ನದೇ ಕನಸುಗಳ ಬಿಂಬ ತೋರೀತು,
ನಿನ್ನ ಪಾಲಿಗೆ ಕಲ್ಲಾದ ಹೃದಯದ
ಬಗ್ಗೆ ಕನವರಿಸಬೇಡ
ಕಲೆತ ಕಾರ್ಮೋಡ ಕರಗಲಿ,
ಹೊಸದೊಂದು ವಸಂತ ನಿನ್ನತ್ತ ತಿರುಗಲಿ
ಯಾರೂ ಬದುಕಲಾರದಷ್ಟು ನಿಕೃಷ್ಟರಲ್ಲ
ನಿನ್ನ ಬದುಕೇ ಆಶ್ಚರ್ಯ ಪಡುವಷ್ಟು
ದಿಟ್ಟವಾಗಿ ಬದುಕನ್ನು ಎದುರಿಸು
ನಿನ್ನೊಂದಿಗೆ ಈ ಗೆಳಯನಿದ್ದಾನೆ,
ಇಗೋ ನಿನ್ನ ಬದುಕ ಹಣತೆಗೆ
ಹೊಸ ದೀಪವಿರಿಸು... *


(೨೦೦೧-೦೨ ರ ಸುಮಾರಿಗೆ ಗೀಚಿದ್ದು...)

(* 'ಸಾಲುಗಳು ಸಮಂಜಸವಾಗಿಲ್ಲ ಬದಲಾಯಿಸದರೆ ಒಳಿತು' ಎಂದು ಪ್ರೀತಿಪೂರ್ವಕವಾಗಿ ಆಗ್ರಹಿಸಿ, ಜೊತೆಗೆ ನನಗೂ ಅದು ಹೌದೆನಿಸುವಂತೆ ಮಾಡಿದ ಸಹೃದಯ ಮಿತ್ರರಾದ ಸುಪ್ತದೀಪ್ತಿ, ಮನಸ್ವಿನಿ ಹಾಗು ವಿಜೇಂದ್ರ ಅವರಿಗೆ ನಾನು ಅನವರತ ಋಣಿಯಾಗಿರುತ್ತೇನೆ. ಬರಿಯ ಹುರಿದುಂಬಿಸುವುದಲ್ಲದೆ, ತಪ್ಪಿದಲ್ಲಿ ಹೀಗೆ ನನ್ನನ್ನು ತಿದ್ದುತ್ತಾ ಇರಿರೆಂದು ಓದುಗರಲ್ಲಿ ವಿನಂತಿ!....)

Tuesday, April 3, 2007

ಹುಚ್ಚು ಪ್ರೀತಿ

ಇಬ್ಬನಿಯೊಂದು ನಿನ್ನ ಹಣೆಯನು ಸೋಕಿದಾಗ
ತಿಳಿಗೊಳದಲಿ ಚಂದ್ರನ ಬಿಂಬ ಕಂಡಾಗ
ತಂಪು ಮರಳಿನಲಿ ನಿನ್ನ ಪಾದಮುಳುಗಿದಾಗ
ಗುಲಾಬಿಯೊಂದು ಅರೆ ಬಿರಿದು ನಕ್ಕಾಗ
ನನ್ನ ಸಾಲುಗಳೆಲ್ಲಾ ನಿನಗೆ ತಲುಪಿದಾಗ
ಈ ನನ್ನ ಹುಚ್ಚು ಪ್ರೀತಿ ನಿನಗೂ ತಾಗೀತು


ಕತ್ತಲು ಬಳ್ಳಿ ನಿನ್ನ ಕಾಲಿಗೆ ತೊಡರಿದಾಗ
ಕಣ್ಣುಗಳಲಿ ಕನಸುಗಳೇ ಬೀಳದಿದ್ದಾಗ
ಕನ್ನಡಿ ಸುಳ್ಳು ಹೇಳಲು ಶುರುವಿಟ್ಟಾಗ
ನಿನ್ನ ಆ ಗುಲಾಬಿ ಅರಳದೇ ಬಾಡಿದಾಗ
ನಿನ್ನದೇ ನೆರಳು ನಿನಗೆ ಕಾಣದಾದಾಗ
ಈ ನನ್ನ ಹುಚ್ಚು ಪ್ರೀತಿ ನಿನಗೂ ನೆನಪಾದೀತು

Sunday, March 11, 2007

ಪ್ರೀತಿಯೆಂದರೆ...!

ಅವರ ಪ್ರಕಾರ
ಪ್ರೀತಿಯೆಂದರೆ
ಒಂದು ನದಿ,
ಹತ್ತಾರು ಮುಗ್ಧ
ಜೊಂಡುಗಳನ್ನು
ಮುಳುಗಿಸುತ್ತಾ
ಸಾಗುವ ತೊರೆ!
ಮತ್ತೆ ಕೆಲವರಿಗೆ,
ಇಡಿ ಎದೆಯನ್ನೇ
ರಕ್ತದಲ್ಲಿ ಅದ್ದುವ
ಕತ್ತಿಯ ಅಲುಗು!
ಮಿಕ್ಕವರ ಪಾಲಿಗೆ
ಅದು ಎಲ್ಲವನ್ನೂ
ನುಂಗುವ ಒಂದು
ಅನಿವಾರ್ಯ ಹಸಿವು!
ಆದರೆ, ಹುಡುಗಿ!
ನನ್ನ ಪಾಲಿಗೆ
ಪ್ರೀತಿಯೊಂದು ಸ್ನಿಗ್ಧ
ಹೂವು ಹಾಗು ನೀನೆ
ಅದರ ತಾಯಿ ಬೇರು!

ಅವಳ ನೆನಪು!

ಒಮ್ಮೆಲೇ ಅವಳ ನೆನಪಾಯಿತು,
ಎದೆಯ ರಕ್ತವನ್ನೇ ಬಸಿದು, ಲೇಖನಿಗೆ ತುಂಬಿಸಿ,
ಕಣ್ಣು ಮುಚ್ಚಿ, ತುಟಿ ಕಚ್ಚಿ,
ನನ್ನ ನೋವನ್ನೇ ಬರೆದೇ ಬರೆದೆ..
ಆದರೆ ಕಣ್ಣು ಬಿಟ್ಟಾಗ ಏನಿತ್ತು!?
ನನ್ನ ಕಣ್ಣೀರೆ ಎಲ್ಲವನ್ನೂ ಅಳಿಸಿ ಹಾಕಿತ್ತು!!

Wednesday, February 28, 2007

ನನ್ನದಲ್ಲ...

ಆಗೆಲ್ಲಾ ಅವನ ಕಣ್ಣೊಳಗೆ ನನ್ನದೇ ಬಿಂಬವಿರುತ್ತಿತ್ತು
ಈಗೀಗ ನನ್ನೆದೆಯ ಕನ್ನಡಿಯಲ್ಲೂ ನಾನು ಕಾಣುತ್ತಿಲ್ಲ

ನನ್ನೊಳಗೇನಿತ್ತು ಇಂದಿಗೂ ಅವನಲ್ಲದೆ
ನಾನು ಈಗಲೂ ಅಲ್ಲಿದ್ದೇನೆಯೆ? ಸಾಧ್ಯವೇ ಇಲ್ಲ

ಸತ್ತ ಕನಸುಗಳನ್ನು ಎಡವಿ ಮುಗ್ಗರಿಸುತ್ತಿದ್ದೇನೆ
ನನ್ನೊಳಗೇನಿದೆ ಬರಿಯ ಕತ್ತಲೆಯಷ್ಟೆ, ಬಣ್ಣವಿಲ್ಲ

ಅವನ ಪ್ರೀತಿಗೆ ನನ್ನ ಹಕ್ಕಿನ ಮಾತು ಹಾಗಿರಲಿ
ಬೇಸರವಿಷ್ಟೆ ಈ ನೋವು ಸಹ ಅವನ ಸ್ವತ್ತೇ, ನನ್ನದಲ್ಲ!

Wednesday, January 31, 2007

ತಿರುಗಿ ಬರಲಾರೆ...

ಬಹಳ ಕಾಡುತ್ತಿವೆಯೆ ನನ್ನೊಂದಿಗೆ ಕಳೆದ ಕ್ಷಣಗಳು,
ಅವನ್ನು ಬದುಕಿಗೆ ಮತ್ತೆ ಕೂಡ ಬೇಕೆನಿಸುತ್ತಿದೆಯೆ!?
ತಿರುಗಿ ಬಾ ಎಂದರೆ ಹೇಗೆ ತಾನೆ ಬರಲಿ ಹೇಳು
ನನ್ನ ಈ ಕತ್ತಲ ಗೋರಿಗೇನು ಬಾಗಿಲುಗಳಿವೆಯೇ!?

Tuesday, January 16, 2007

ಕಾರಣಗಳು

ಚಿಕ್ಕದೊಂದು ಕಾರಣ, ಅಪ್ಪ ಅಮ್ಮನೊಂದಿಗಿನ ಮುನಿಸು
ತೀರ ಬಾಲಿಶವಾಗಿ ಹಿಂದು ಮುಂದು ಯೋಚಿಸದೇ
ಆ ಹುಡುಗ ಸೀದ ನೇಣ ಕುಣಿಕೆಗೆ ಕೊರಳೊಡ್ಡಿದ್ದ
ಇದ್ದೊಬ್ಬ ಕುಡಿಯ ಸಾವಿನ ಹೊಡೆತ ತಾಳಲಾಗಲಿಲ್ಲ
ಮತ್ತೆ ಚಿಗುರುವ ಭರವಸೆ ಇರಲಿಲ್ಲ ಅವರಲ್ಲಿ
ಆ ಚಿತೆಯ ಬೆಂಕಿ ಅವರ ಬದುಕನ್ನು ಸುಡದಿರಲಿಲ್ಲ
ಮತ್ತೆ ಕೆಲವೇ ದಿನ, ಎಲ್ಲವನ್ನೂ ಬಿಟ್ಟು
ಮಗ ಕಾಲವಾದ ಮರದ ಇನ್ನೊಂದು ಬದಿಗೆ
ತಾವೂ ನೇತು ಬಿದ್ದರು ಹಗ್ಗದ ತುದಿಗೆ
ಇವರ ಬದುಕು ಬಾಳಲಾರಷ್ಟು ನಿಕೃಷ್ಟವಾಗಿತ್ತೆ?

ಮುಂಬಯಿಯ ರೈಲು ಸೇತುವೆಯೊಂದರಲ್ಲಿ
ಹಣ್ಣು ಹಣ್ಣು ಮುದುಕ, ಮುಗ್ಗಲು ಹಿಡಿದ ಬಟ್ಟೆಯೊಂದಿಗೆ
ಒಂದು ಕೈಯಲ್ಲಿ ಚಪ್ಪಲಿ ಇನ್ನೊಂದರಲ್ಲಿ ಭಿಕ್ಷೆ ಬಟ್ಟಲು
ತೆವಳುತ್ತಿದ್ದ ಜನರಿಂದ ಜನರೆಡೆಗೆ ಕೊಳೆತ ಕಾಲೆಳೆಯುತ್ತಾ
ಆದ್ರವಾಗಿ ಅನ್ನವನ್ನು ಬೇಡುತ್ತಾ, ಕರುಣೆಯ ಕೈಗಳಿಗಾಗಿ
ನೂಕ ನುಗ್ಗಲಿನಲ್ಲಿ ಯಾರೋ ಬೈಯ್ಯುತ್ತಿದ್ದರು ಆತನಿಗೆ
ಸಾಯಲು ಸಾಕಿತ್ತಲ್ಲವೇ ಈ ಸಂಪತ್ತು, ನೋವು ?

Friday, January 5, 2007

ನಾನವಳನ್ನು ಮರೆತು ಹಾಯಾಗಿದ್ದೇನೆ..!!

ನಿಜವಿದು ನಂಬುವುದಾದರೆ ನಂಬು
ನಾನವಳನ್ನು ಮರೆತು ಹಾಯಾಗಿದ್ದೇನೆ
ಎದೆಯಲ್ಲಿನ ಪ್ರೀತಿ ಎಂದೋ ಮಣ್ಣಾಗಿದೆ,
ನಾನವಳನ್ನು ಮರೆತು ಹಾಯಾಗಿದ್ದೇನೆ

ಬದಲಾದ ಹವೆಯಿಂದ ಸ್ವಲ್ಪ ಹಣ್ಣಾಗಿದ್ದೇನೆ
ಚಹರೆ ಒಂದಿಷ್ಟು ಬದಲಾಗಿದೆ
ಮತ್ತೆ ಮತ್ತೆ ಹೇಗಿದ್ದೀಯ ಎಂದು ಕೇಳಬೇಡ
ನಾನವಳನ್ನು ಮರೆತು ಹಾಯಾಗಿದ್ದೇನೆ

ನನ್ನ ವೇಷ ನೋಡಿ ಗಾಬರಿಯಾಗ ಬೇಡ
ನನ್ನ ಕಣ್ಣಲ್ಲಿ ಅವಳನ್ನು ಹುಡುಕಬೇಡ
ಹೀಗೆ ಬಿಡುಗಣ್ಣಲ್ಲಿ ನನ್ನ ನೋಡಬೇಡ
ನಾನವಳನ್ನು ಮರೆತು ಹಾಯಾಗಿದ್ದೇನೆ

ಇವಕ್ಕೇನು ಭ್ರಮೆಯೇ, ರಾತ್ರಿ ಇಡೀ
ನಿದ್ರೆ ಬಾರದೇ ಕಾಡಿಸುತ್ತದೆ
ಕಡೇ ಪಕ್ಷ ಅವಕ್ಕೂ ತಿಳಿಯದೇ
ನಾನವಳನ್ನು ಮರೆತು ಹಾಯಾಗಿದ್ದೇನೆ

ನೋವಿನ ದುರ್ಗಂಧವಾಗಿ
ನೀರವತೆ ಮನದೆಲ್ಲೆಡೆ ಹರಡುತ್ತಿದೆ
ಒಳ ಗೋಡೆಗಳಲ್ಲಿ ಯಾರಾದರೂ ಬರೆಯಬಾರದೆ
ನಾನವಳನ್ನು ಮರೆತು ಹಾಯಾಗಿದ್ದೇನೆ..!!

Thursday, January 4, 2007

ನಿಂತ ಬದುಕು..

ಸ್ವಾಥ೯ ಜನರ ಮಧ್ಯೆ ಅಥ೯ವಿರದೆ ಹೋದ
ಪ್ರೀತಿಗಾಗಿ ದುಖಿಃಸುವುದನ್ನು ನಿಲ್ಲಿಸಿದ್ದೇನೆ

ಮುಳ್ಳುಗಳು ಸಾಕೆನಿಸಿವೆ ನನಗೆ, ನನ್ನದೇ
ಎದೆಯಂಗಳದಲ್ಲಿ ಹೂ ಅರಳಿಸುವುದನ್ನು ನಿಲ್ಲಿಸಿದ್ದೇನೆ

ವಿನಾಕಾರಣವಾಗಿ ಪ್ರೀತಿಸಿದ್ದು ಅವರಿಗೆ ಬೇಡವಾಯಿತು,
ಈಗ ಕಾರಣವಿದ್ದರೂ ದ್ವೇಷಿಸುವುದನ್ನೂ ನಿಲ್ಲಿಸಿದ್ದೇನೆ

ಅವರವರ ಹಣೆಬರಹಕ್ಕೆ ತಕ್ಕಂತೆ ಬದುಕಲಿ,
ಅವರಿಗಾಗಿ ನನ್ನ ಹಣೆಯನ್ನು ಬರಿದಾಗಿಸುವುದನ್ನು ನಿಲ್ಲಿಸಿದ್ದೇನೆ

ಅವರ ನೋವುಗಳನ್ನು ಓದಿ ಅನಕ್ಷರಸ್ಥನಾದೆ,
ಇದೀಗ ನನ್ನದೇ ಸಾಲುಗಳನ್ನ ಬರೆಯುವುದನ್ನ ನಿಲ್ಲಿಸಿದ್ದೇನೆ..

ನಿನಗಾಗಿ...

ದೇವರು ಕೊಡುತ್ತಿದ್ದರೆ
ಇನ್ನಷ್ಟು ಕರುಣೆಯನ್ನು ಬೇಡುತ್ತಿದ್ದೆ
ಆತ ಕೊಳ್ಳುತ್ತಿದ್ದರೆ, ನನ್ನೆಲ್ಲ ಸಂತೋಷಗಳನ್ನು
ಮಾರಿಯಾದರೂ ನಿನ್ನ ನೋವುಗಳನ್ನು ಖರೀದಿಸುತ್ತಿದ್ದೆ... ...

ಆದರೂ...

ನಾನು ಎಲ್ಲವನ್ನೂ ಮಾತಿನಲ್ಲಿ ಹೇಳುವುದಿಲ್ಲ
ಅದರರ್ಥ ನಿನ್ನ ಪ್ರೀತಿಸುವುದೇ ಇಲ್ಲ ಎಂದಲ್ಲ

ನಿನ್ನನ್ನು ಎಂದೆಂದಿಗೂ ಪ್ರೀತಿಸುತ್ತಿರುತ್ತೇನೆ ಆದರೆ,
ನಿನ್ನದೇ ನೆನಪಿನಲ್ಲಿ ಸಮಯ ಹಾಳು ಮಾಡುತ್ತೇನೆಂದಲ್ಲ

ನನ್ನ ಪ್ರೀತಿ ಪ್ರಪಂಚದ ನಗೆಪಾಟಲಾಗ ಬೇಕೇಕೆ?
ಯಾರಲ್ಲೂ ನನ್ನ ನೋವನ್ನು ಹೇಳಿಕೊಳ್ಳುವುದಿಲ್ಲ

ನನ್ನ ಪಾಲಿಗೆಷ್ಟು ಸಿಕ್ಕ್ಕಿದೆಯೋ ಅಷ್ಟಕ್ಕೆ ನೆಮ್ಮದಿ ಇದೆ
ನೀನು ನನಗೆ ಸಿಗದಿದ್ದರ ಬಗ್ಗೆ ದೇವರನ್ನು ದೂರುವುದಿಲ್ಲ

ಇಷ್ಟೆಲ್ಲಾ ಆದರೂ ನಿನ್ನಲ್ಲೇನೋ ಇದೆ, ಇಲ್ಲದಿದ್ದರೆ
ನಿನ್ನನ್ನು ಹೀಗೆ ವಿನಾಕಾರಣ ಪ್ರೀತಿಸುತ್ತಿರಲಿಲ್ಲ

ಇರಲಾರೆಯಾ...?

ನನ್ನ ಜೊತೆಗಿದ್ದರೆ ನೀನು
ಕಳೆದೇನು ಹಳೆಯ ನೋವುಗಳನ್ನ
ಕೂಡಿದೇನು ಒಂದಿಷ್ಟು ನಗುವನ್ನ
ಕಂಡೇನು ಇನ್ನಷ್ಟು ಕನಸುಗಳನ್ನು
ನಿನಗಾಗಿ ನಾನಾಗಿಯೇ ಬದುಕಿಯೇನು
ಇರಲಾರೆಯ ನನ್ನ ಜೊತೆಗೆ....