Tuesday, August 19, 2008

ಹೆಸರಿನ ಹಂಗಿಲ್ಲದ ಹನಿಗಳು..

ಸತ್ತು ಸುಧಾರಿಸಿಕೊಳ್ಳುತ್ತಿದ್ದವನ
ಗೋರಿಯ ಮೇಲೆ
ನೀ ಬಂದು ಕೂತಾಗ
ತಲೆಗೆ ಕಲ್ಲು ಬಡಿದಂತಾಗಿ
ಬೆಚ್ಚಿ ಬಿದ್ದು ಎದ್ದು ಕುಳಿತೆ
ಇನ್ನೆಲ್ಲಿಯ ನಿದ್ರೆ!

*~*~*~*

ಕಾಲನ ಕಲ್ಲುಗಳ ಮೇಲೆ ಕೆತ್ತಿದ
ಕವಿತೆ ನಿನ್ನ ನೆನಪುಗಳು;
ಮಾಯಲು ಅವೇನು ಗಾಯಗಳೆ?
ಕೊನರುವುದಿಲ್ಲ, ಕರಗುವುದಿಲ್ಲ
ಬಿರುಗಾಳಿಗೆ ನಲುಗುವುದೂ ಇಲ್ಲ.
ಕೇವಲ ಹಸಿರಾಗುತ್ತವೆ
ಕಣ್ಣೀರ ಮಳೆಗೆ ಪಾಚಿ ಕಟ್ಟಿದಾಗ!

*~*~*~*

ಕತ್ತಲಿನಂತೆ
ಬೆಳಕಿಗೂ
ನೆರಳಿರುವುದಿಲ್ಲ!

Tuesday, August 5, 2008

ಎರಡೆ ಎರಡು ಹನಿಗಳು..

ಉತ್ತರ

ದೀಪಗಳಿರುವುದು
ಉರಿಯಲೆ ಅಥವ ಉರಿಸಲೆ?
ಉತ್ತರ ಹುಡುಕ ಹೋದ
ಎಷ್ಟೋ ಹುಳಗಳು ಕರಕಲಾದವು

*~*~*

ಸಿಗದ ಲೆಕ್ಕ

ಬದುಕಿನ ಗಣಿತದಲ್ಲಿ,ಕೂಡಿದ್ದು ಎಲ್ಲಿ ಉಳಿದೀತು?
ಕಳೆದ ಕ್ಷಣಗಳಂತೂ ನೆನಪಿನ ಖಾತೆಗೆ ಜಮಾ;
ತಾಳೆಯಾದೀತೆಂದು ತಾಳ್ಮೆಯಿಂದ ಕಾದರೂ
ಕೊನೆಗೆ ಉಳಿವುದು ಸಾವೆಂಬ ಸೊನ್ನೆಯೆ!