Sunday, June 29, 2008

ಅಹಲ್ಯೆಯ ಸ್ವಗತ


ಕತ್ತಲ ಬದುಕಿನ
ಸುತ್ತಲೂ ಹಾರುವ
ಬೆಳಕಿನ ಹಕ್ಕಿಗಳು
ಮಾನ ಕಳೆಯುತ್ತವೆ
ಕತ್ತಲಿನಲ್ಲಿ ಎಣ್ಣೆಯನ್ನು
ಸೆಳೆಯುತ್ತಾ ನಗುವ
ದೀಪದ ಕುಡಿಗಳು
ನನ್ನದೆ ಬಟ್ಟೆಯ ಚೂರುಗಳಿಂದ
ನನ್ನೆದೆಯನ್ನು ಸುಡುತ್ತವೆ
ಆಗೆಲ್ಲಾ ವ್ಯರ್ಥವಾಗುತ್ತಿದ್ದ
ಕಣ್ಣೀರಿನ ಹನಿಗಳೆ ಈಗ
ಬೆಂಕಿಯಾರಿಸಿ ಕತ್ತಲಾಗಿಸುತ್ತವೆ
ಕೆಂಡ ಸುಂಯ್ಯ್‍ ಎನ್ನುತ್ತಾ
ಇದ್ದಿಲಾಗುತ್ತದೆ
ನಾನು ಕೂತಲ್ಲೆ
ತಣ್ಣಗಾಗುತ್ತೇನೆ,
ಮಂಜುಗಡ್ಡೆಯ
ಕಲ್ಲಾಗುತ್ತೇನೆ
ಕೊನರುವ ಆಸೆಯೊಂದಿಗೆ
ಕೊರಡಾಗುತ್ತೇನೆ
ಬೆಳಕ ಹರಡುವ ಸೂರ್ಯ
ಸುಡತೊಡಗುತ್ತಾನೆ

{ಬಿನ್ನಹ: ನನ್ನ ಬ್ಲಾಗ್ ಅಪ್ಡೇಟ್ ಆಗದೆ ಬಹಳ ದಿನಗಳು ಎನ್ನುವುದಕ್ಕಿಂತ, ಬಹಳ ತಿಂಗಳುಗಳೆ ಕಳೆದಿದ್ದವು.! ಇದಕ್ಕಾಗಿ ಕಾದು, ನಿರಾಶರಾದ ಎಲ್ಲರಲ್ಲೂ ಕ್ಷಮೆ ಯಾಚಿಸುತ್ತಿದ್ದೇನೆ. ಯಾಕೆ ಬರೆಯಲಿಲ್ಲ, ಎಲ್ಲಿ ಹೋಗಿದ್ದೆ ಈ ಎಲ್ಲವಕ್ಕೂ ಕಾರಣ, ಸಮಜಾಯಿಶಿಗಳು ಇಲ್ಲಿ ಅಪ್ರಸ್ತುತ. ಬರೆಯದೆ ಕೂತಿದ್ದ ನನ್ನನ್ನು ಹಾಗು ನನ್ನ ಮನಸ್ಸಾಕ್ಷಿಯನ್ನು ಪ್ರೇರೇಪಿಸಿ ಮತ್ತೆ ಬರೆಯಲು ಆರಂಭಿಸುವಂತೆ ಮಾಡಿದ ಎಲ್ಲ ಸಹ ಬ್ಲಾಗಿಗಳು ಹಾಗು ಸ್ನೇಹಿತರಿಗೂ ನಾನು ಋಣಿ. ಅಪರಾಧವಂತೂ ಆಗಿದೆ, ಈ ನನ್ನ ತಪ್ಪಿಗೆ ನಿಮ್ಮಲ್ಲಿ ಮತ್ತೊಮ್ಮೆ ಕ್ಷಮೆ ಕೋರುತ್ತಾ ಮತ್ತೆ ಬ್ಲಾಗಿಸುತ್ತಿದ್ದೇನೆ.. ಅಂದ ಹಾಗೆ ನಿಮ್ಮ ಯಾವ ಶಿಕ್ಷೆಗೂ ನಾನು ರೆಡಿ!! ನಿಮ್ಮ ಶಿಕ್ಷೆಯೆ ನನಗೆ ಶ್ರೀರಕ್ಷೆ!!;)}