Saturday, April 14, 2007

ಸಾಂತ್ವಾನ

ದುಃಖಿಸ ಬೇಡ ಗೆಳತಿ,
ಮರೆಯಲು ಪ್ರಯತ್ನಿಸು
ಮುಚ್ಚಿದ ಹಳೆಯ ಬಾಗಿಲನ್ನು
ವೃಥಾ ನೂಕಿ ಶ್ರಮ ಪಡಬೇಡ
ಅಲ್ಲಿರುವುದು ನಿನ್ನ ಕನಸುಗಳ ಪಳೆಯುಳಿಕೆಗಳು,
ಅರಳುವ ಮೊದಲೇ ಮುರುಟಿದ ಮೊಗ್ಗುಗಳು,
ಅಕ್ಷರವೇ ಇಲ್ಲದೆ ಹಾಳು ಬಿದ್ದ ಖಾಲಿ ಹಾಳೆಗಳು,
ಕತ್ತಲನ್ನು ಮರೆಯಲು ಪ್ರಯತ್ನಿಸು,
ಬದುಕಿನತ್ತ ಮುಖ ತಿರುಗಿಸು,
ಒಡೆದ ಕನ್ನಡಿಯನ್ನು ಆಯಬೇಡ,
ಕೈಗೆ ಚುಚ್ಚಿ ಗಾಯವಾದೀತು, ಜೋಕೆ!
ಅವು ಅಲ್ಲೆ ಕರಗಲಿ ಬಿಡು
ಎದುರಿನ ಹೊಸ ಬಾಗಿಲನ್ನು ಸರಿಯಾಗಿ ದಿಟ್ಟಿಸು,
ಶ್ರದ್ಧೆಯಿರಲಿ, ಅದೇ ಕನ್ನಡಿಯಾದೀತು,
ನಿನ್ನದೇ ಕನಸುಗಳ ಬಿಂಬ ತೋರೀತು,
ನಿನ್ನ ಪಾಲಿಗೆ ಕಲ್ಲಾದ ಹೃದಯದ
ಬಗ್ಗೆ ಕನವರಿಸಬೇಡ
ಕಲೆತ ಕಾರ್ಮೋಡ ಕರಗಲಿ,
ಹೊಸದೊಂದು ವಸಂತ ನಿನ್ನತ್ತ ತಿರುಗಲಿ
ಯಾರೂ ಬದುಕಲಾರದಷ್ಟು ನಿಕೃಷ್ಟರಲ್ಲ
ನಿನ್ನ ಬದುಕೇ ಆಶ್ಚರ್ಯ ಪಡುವಷ್ಟು
ದಿಟ್ಟವಾಗಿ ಬದುಕನ್ನು ಎದುರಿಸು
ನಿನ್ನೊಂದಿಗೆ ಈ ಗೆಳಯನಿದ್ದಾನೆ,
ಇಗೋ ನಿನ್ನ ಬದುಕ ಹಣತೆಗೆ
ಹೊಸ ದೀಪವಿರಿಸು... *


(೨೦೦೧-೦೨ ರ ಸುಮಾರಿಗೆ ಗೀಚಿದ್ದು...)

(* 'ಸಾಲುಗಳು ಸಮಂಜಸವಾಗಿಲ್ಲ ಬದಲಾಯಿಸದರೆ ಒಳಿತು' ಎಂದು ಪ್ರೀತಿಪೂರ್ವಕವಾಗಿ ಆಗ್ರಹಿಸಿ, ಜೊತೆಗೆ ನನಗೂ ಅದು ಹೌದೆನಿಸುವಂತೆ ಮಾಡಿದ ಸಹೃದಯ ಮಿತ್ರರಾದ ಸುಪ್ತದೀಪ್ತಿ, ಮನಸ್ವಿನಿ ಹಾಗು ವಿಜೇಂದ್ರ ಅವರಿಗೆ ನಾನು ಅನವರತ ಋಣಿಯಾಗಿರುತ್ತೇನೆ. ಬರಿಯ ಹುರಿದುಂಬಿಸುವುದಲ್ಲದೆ, ತಪ್ಪಿದಲ್ಲಿ ಹೀಗೆ ನನ್ನನ್ನು ತಿದ್ದುತ್ತಾ ಇರಿರೆಂದು ಓದುಗರಲ್ಲಿ ವಿನಂತಿ!....)

8 comments:

ಸುಪ್ತದೀಪ್ತಿ suptadeepti said...

"ಬದುಕಿನ ಹಣತೆಗೆ ಬೆಂಕಿ ಮುಟ್ಟಿಸು" ಯಾಕೋ ಸರಿ ಅನಿಸುತ್ತಿಲ್ಲ. "ಬದುಕಿನ ಹಣತೆಗೆ ದೀಪವಿಡು" ಸಮಂಜಸವಾದೀತೇನೋ....

ಭಾವಜೀವಿ... said...

suptadeepti
"ಬೆಂಕಿ" ಎನ್ನುವುದು destructive ಪದವಾದ್ದರಿಂದ ನಿಮಗೆ ಹಾಗನಿಸಿದ್ದು ವಾಸ್ತವವೇ! ಆದರೆ 'ಹಣತೆ' ಹಾಗು 'ದೀಪ' ಎರಡೂ ಒಂದೇ ಅರ್ಥ ಕೊಡುವುದರಿಂದ ನೀವು ಸೂಚಿಸಿದ್ದು ಸರಿಯಾದೀತೆ!?

ಸುಪ್ತದೀಪ್ತಿ suptadeepti said...

"ಹಣತೆ" ಪದದ ಅರ್ಥ "ಮಣ್ಣಿನ ಚಿಕ್ಕ ಬಟ್ಟಲಿನಂತಹ ದೀಪವಿರಿಸಬಲ್ಲ ಪಾತ್ರೆ, ಪಣತೆ". ಅದರಲ್ಲಿ ಎಣ್ಣೆ ತುಂಬಿ, ಬತ್ತಿ ಇಟ್ಟು, ದೀಪವಿಟ್ಟರೆ ಅದು "ಹಣತೆ ದೀಪ", ರೂಢಿಯಲ್ಲಿ ಬರೇ ಹಣತೆ ಆಗಿದೆ. ಬೆಂಕಿ ಪದ destructive ಅನ್ನುವುದಕ್ಕಿಂತಲೂ "ಬೆಂಕಿ ಮುಟ್ಟಿಸು, ಬೆಂಕಿ ಇಡು" ಮುಂತಾದ ಪದಪುಂಜ destructive ಅರ್ಥ ಕೊಡುವವು. "ಪಟಾಕಿಯ ಬತ್ತಿಗೆ ಬೆಂಕಿಯಿಡು" ಎನ್ನುವುದು ಸರಿಯಾದ ಪ್ರಯೋಗ ಆದಂತೆ "ಹಣತೆಯ ಬತ್ತಿಗೆ ಬೆಂಕಿಯಿಡು" ಎನ್ನುವುದು ಆಗಲಾರದು... ಇದು ನನ್ನ ಅಭಿಪ್ರಾಯ, ತಿಳಿದವರು ಯಾರಾದರೂ ಸ್ಪಷ್ಟೀಕರಿಸಿದರೆ ಒಳ್ಳೆಯದು.

ಮನಸ್ವಿನಿ said...

"ಇಗೋ ನಿನ್ನ ಬದುಕಿನ ಹೊಸ ಹಣತೆಗೆ
ಬೆಂಕಿ ಮುಟ್ಟಿಸು"

ಇದು ನನಗೂ ಸರಿ ಅನ್ನಿಸುತ್ತಿಲ್ಲ.

"ಇಗೋ ನಿನ್ನ ಬದುಕಿನ
ಹೊಸ ಹಣತೆಯ ಹೊತ್ತಿಸು (ಬೆಳಗಿಸು)"

ಅಂತ ಬದಲಾಯಿಸು..
ಬೆಂಕಿ ಮುಟ್ಟಿಸು ಅನ್ನೊದು destructive ಅನ್ನಿಸ್ತಾ ಇದೆ. ಸುಪ್ತದೀಪ್ತಿ ಹೇಳಿದ್ದು ಸರಿ ಅಂತ ನನ್ನ ಅನಿಸಿಕೆ

ಭಾವಜೀವಿ... said...

Biby Cletus,
Thanks for ur warm words...!!
Visit quite often and I am sure you will find some points to ponder if u are guy who can feel the feelings deeply!!

By the way, tell me about yourself..

Shiv said...

ಭಾವಜೀವಿಯವರೇ,

ಹೊಸ ಬಾಗಿಲು..ಹೊಸ ವಸಂತ..
ಹೊಸ ದೀಪ..

ಕೊನೆ ಸಾಲು ತುಂಬಾ ಹಿಡಿಸಿತು..

ಭಾವಜೀವಿ... said...

ಆತ್ಮೀಯ ಶಿವ್!!
ಧನ್ಯವಾದಗಳು ನಿಮ್ಮ ನಲ್ಮೆಯ ಮಾತುಗಳಿಗೆ!!
ಹಳೆಯ ನೋವನ್ನು ಮರೆಯಲು ಹೊಸ ಜಗತ್ತು ಅನಿವಾರ್ಯವಲ್ಲವೆ!!?

Anonymous said...

I think it has to be ninna baduka hanathege hosa belaka tharisu