Tuesday, June 12, 2007

ಗುಲಾಬಿ ಗೊಂಚಲು

{ಎಲ್ಲೋ, ಎಂದೋ ಓದಿದ ಹೀಗೊಂದು ಕಥೆ!
ಸದಾ ನನ್ನನ್ನು ಕಾಡುವ ಕಥೆಗಳಲ್ಲಿ ಈ 'ಗುಲಾಬಿ ಗೊಂಚಲು 'ಸಹ ಒಂದು. ಇದನ್ನು ಬರೆದವರು ಯಾರೂ ಎಂದೂ ಸಹ ನನಗೆ ನೆನಪಿಲ್ಲ! ಯಾರೇ ಆಗಲಿ ಆತ ಅದ್ಭುತ ಕತೆಗಾರನಂತು ಹೌದು. ನಿಜ ಹೇಳಬೇಕೆಂದರೆ, ಇದರ ನಿಜವಾದ ಹೆಸರು 'ಗುಲಾಬಿ ಗೊಂಚಲು' ಹೌದೋ ಅಲ್ಲವೋ ನನಗೆ ನೆನಪಿಲ್ಲ. ಆದರೆ ಈ ಹೆಸರು ಇದಕ್ಕೆ ಸೂಕ್ತವೆನಿಸುವುದರಿಂದ ಹಾಗು ಇದು ಹಾಗೆ ನನ್ನ ಮನಸ್ಸಿನಲ್ಲಿ ಉಳಿದುದರಿಂದ ಅದನ್ನೆ ಶೀರ್ಷಿಕೆಯಾಗಿ ಬಳಸಿಕೊಳ್ಳುತ್ತಿದ್ದೇನೆ. ನಿಮಗೂ ಸಹ ಇಷ್ಟವಾಗಬಹುದು ಎಂದೆನಿಸಿ ನಿಮ್ಮಲ್ಲಿ ಹಂಚಿಕೊಳ್ಳುತಿದ್ದೇನೆ.}


ನಿಧಾನ ಗತಿಯಲ್ಲಿ ಬಸ್ಸು ಸಾಗುತ್ತಿತ್ತು. ಬಸ್ಸಿನಲ್ಲಿ ಕೇವಲ ಬೆರಳೆಣಿಕೆಯಷ್ಟು ಜನರು ಮಾತ್ರವೇ ಇದ್ದರು. ಸರಿ ಸುಮಾರು ಬಸ್ಸಿನ ಎಡ ಮಧ್ಯದಲ್ಲಿ ಆ ತುಂಟ ಕಂಗಳ ಸುಂದರ ಹುಡುಗಿ ಕುಳಿತಿದ್ದಳು. ಅವಳ ಕಣ್ಣೋ ಸುತ್ತೆಲ್ಲಾ ಓಡಾಡುತ್ತಿತ್ತು. ಅವಳಿಗಿಂತ ೪-೫ ಸಾಲು ಮುಂದೆ ಬಲಬದಿಯಲ್ಲಿ ನಡುವಯಸ್ಸಿನ ಆತ ಕುಳಿತಿದ್ದ. ಎಲ್ಲೆಡೆ ಹರಿದಾಡುತ್ತಿದ್ದ ಅವಳ ದೃಷ್ಟಿ ತಟ್ಟನೆ ಅವನ ಕೈಲಿದ್ದ ಸುಂದರ ಗುಲಾಬಿ ಗೊಂಚಲಿನಲ್ಲಿ ನಿಂತತು. ಗುಲಾಬಿ ಎಂದರೆ ಜಗವನ್ನೇ ಮರೆಯುವ ಅವಳಿಗೆ ಅಷ್ಟೊಂದು ಚಂದದ ಗುಲಾಬಿ ಗೊಂಚಲಿನಿಂದ ಕಣ್ಣನ್ನು ಕೀಳಲಾಗಲೆ ಇಲ್ಲ. ಅನ್ಯಮನಸ್ಕನಾಗಿ ಕುಳಿತಿದ್ದ ಆತ ಫಕ್ಕನೆ ಅವಳನ್ನು ಗಮನಿಸಿದ. ಅವಳು ಗುಲಾಬಿಯನ್ನು ಆಸೆಯ ಕಣ್ಣುಗಳಿಂದ ನೋಡುತ್ತಿರುವುದು ಅವನ ಅರಿವಿಗೆ ಬಂತು. ಕ್ಷಣಕಾಲ ತದೇಕ ಚಿತ್ತದಿಂದ ಗೊಂಚಲನ್ನು ನೋಡಿದ. ನಂತರ ಏನೋ ನಿರ್ಧರಿಸದಂತೆ ತನ್ನ ಸೀಟಿನಿಂದೆದ್ದು ಅವಳ ಬಳಿಗೆ ಬಂದು ನಿಂತ. ಬಲಗೈಯಲ್ಲಿದ್ದ ಗೊಂಚಲನ್ನು ಅವಳತ್ತ ಚಾಚಿದ. ಅವಳು ಒಮ್ಮೆಲೆ ಅವಕ್ಕಾದಳು. ಏನು ಮಾಡಬೇಕೆಂದು ತೋಚದೆ ಒಂದರೆ ಕ್ಷಣ ಗಲಿಬಿಲಿಗೊಂಡಳು, ತೆಗೆದು ಕೊಳ್ಳಲೆ ಬೇಡವೆ ಎಂದು ಯೋಚಿಸುತ್ತಿರುವಾಗಲೆ, ಶಾಂತಚಿತ್ತ ಸ್ವರದಲ್ಲಿ ಆತನೆಂದ "ತೆಗೆದುಕೋ ಪರವಾಗಿಲ್ಲ, ನನ್ನ ಹೆಂಡತಿಗೆಂದು ತೆಗೆದು ಕೊಂಡು ಹೋಗುತ್ತಿದ್ದೆ. ಗುಲಾಬಿಯನ್ನು ಬಹಳ ಇಷ್ಟ ಪಡುವ ಹುಡುಗಿಯೊಬ್ಬಳಿಗೆ ಕೊಟ್ಟೆ ಎಂದರೆ ಅವಳೇನು ಬೇಜಾರು ಮಾಡಿ ಕೊಳ್ಳೋದಿಲ್ಲ. ಯೋಚಿಸಬೇಡ ತಗೋ." ಎಂದನು . ಬೇಡವೆಂದರೂ ತನಗರಿವಿಲ್ಲದೆ, ಅವನ ಕೈಯಿಂದ ಹೂ ಗೊಂಚಲನ್ನು ಪಡೆದವಳ ಮುಖದಲ್ಲಿ ಭಯಾಶ್ಚಾರ್ಯಗಳ ಸಂತಸದ ಹೊನಲು! ಕೃತಜ್ಞತೆಯ ಹೊಳಪು ಆಕೆಯ ಕಣ್ಗಳಲ್ಲಿ. ಆತ ಇದೆಲ್ಲದರ ಅರಿವಿಲ್ಲದವನಂತೆ, ತಾನು ಬಂದ ಕೆಲಸವಾಯಿತೆಂದು ನಿರಮ್ಮಳನಾಗಿ ತನ್ನ ಜಾಗಕ್ಕೆ ಹಿಂತಿರುಗಿದ. ಎರಡೂ ಕೈಗಳಲ್ಲಿ ಹೂಗಳನ್ನು ಹಿಡಿದು ಪ್ರಪಂಚದ ಅರಿವಿಲ್ಲದಂತೆ ಧನ್ಯ ಭಾವದಿಂದ ಮೂಕವಾಗಿ ನೋಡುತ್ತಿದ್ದವಳಿಗೆ, ಬಸ್ಸು ನಿಧಾನಗೊಂಡು ಗಕ್ಕನೆ ನಿಂತಾಗ ವಾಸ್ತವದ ಅರಿವಾಯಿತು. ತಲೆ ಎತ್ತಿ ನೋಡಿದಾಗ ಆತ ಇಳಿಯಲು ಅನುವಾಗುತ್ತಿದ್ದುದು ಕಂಡಿತು. "ಛೆ !ಒಂದು ಥ್ಯಾಂಕ್ಸ್ ಸಹ ಹೇಳದೇ ಹೋದೆನಲ್ಲ ನಾನೆಂತವಳು " ಎಂದು ತನ್ನ ಮರೆವಿಗೆ ತಾನೆ ಹಳಿದು ಕೊಳ್ಳುವಾಗಲೆ ಆತ ಇಳಿದಾಗಿತ್ತು. ಆತ ಎಲ್ಲಿ ಹೋಗುತ್ತಾನೆ ಎಂದು ಕುತೂಹಲದಿಂದ ಆಕೆ ಬಸ್ಸಿನ ಕಿಟಕಿ ಯಿಂದ ಕಣ್ಣು ಹಾಯಿಸಿದಳು. ಬಸ್ಸಿನಿಂದಿಳಿದ ಆತ ನಿಧಾನವಾಗಿ ಹತ್ತಿರವೇ ಇದ್ದ ಸ್ಮಶಾನದೆಡೆಗೆ ಹೆಜ್ಜೆ ಹಾಕುತ್ತಿದ್ದ, ತನ್ನ ಹೆಂಡತಿಯ ಸಮಾಧಿಯೆಡೆಗೆ...!

12 comments:

Pramod P T said...

ಅಬ್ಬಾ! ಅಧ್ಬುತ..ಅಧ್ಬುತ!! ಕೊನೆ ಸಾಲನ್ನ ಓದಿದ ಮೇಲಂತೂ ಎನೋ ಬದಲಾವಣೆ ಇದ್ದಕ್ಕಿದ್ದಂತೆ ನನ್ನಲ್ಲಿ...

ಯಜ್ಞೇಶ್ (yajnesh) said...

ಮನಸ್ಸನ್ನು ತಟ್ಟುವ ಕಥೆ. ಚಿಕ್ಕದಾಗಿ ಚೊಕ್ಕದಾಗಿದೆ

ಸಿಂಧು sindhu said...

ಭಾವಜೀವಿ,

ಚಂದದ ಕತೆ.. ಮೊಪಾಸಾನ ಕತೆಗಳನ್ನು ನೆನಪಿಸುತ್ತದೆ. ಒಂದು ಆರ್ದ್ರ ಸನ್ನಿವೇಶಕ್ಕೆ ಅಚ್ಚರಿ ಮತ್ತು ವಿಷಾದ ಬೆರೆಸುವ ಶೈಲಿ..

ನಿಮ್ಮ ನೆನಪು ಮತ್ತು ಚಿತ್ರಣ ಚೆನ್ನಾಗಿದೆ.. ಅವಳು ಕಿಟಕಿಯಿಂದ ಹೊರ ನೋಡಿದಾಗ, ಅವನು ಎಲೆಗಳುದುರಿ ರಸ್ತೆ ಮಸುಕಾಗಿದ್ದ ಸ್ಮಶಾನದ ಗೇಟೊಳಗೆ ಹೋಗುತ್ತಿದ್ದನಾ? ಆಗ ಮಳೆ ಬರುವ ಹಾಗೆ ಮೋಡ ಕವಿದಿತ್ತಾ?

ತುಂಬ ದಿನದಿಂದ ಏನೂ ಚಟುವಟಿಕೆಯಿರಲಿಲ್ಲ.. ಏನು ಕಾದಿರಬಹುದು ಅಂತ ಬಂದೆ. ಚಂದ ಕತೆ ಹೇಳಿದ್ದೀರ.

ಮನಸ್ವಿನಿ said...

ಆಹಾಹ!

ಸುಮ್ನೆ ಇದ್ದು ಬಿಡುತ್ತೇನೆ....ಏನು ಹೇಳಲಾಗುತ್ತಿಲ್ಲ

ಭಾವಜೀವಿ... said...

ಪ್ರಮೋದ್,
ನಿಜ, ಈ ಕತೆಯ ತಾಕತ್ತಿರುವುದೇ ಆ ಕೊನೆಯ ಸಾಲುಗಳಲ್ಲಿ!!

ಯಜ್ಞೇಶ್,
ಅದಕ್ಕೆ ಇದು ಸದಾ ನನ್ನ ಜೊತೆಯೇ ಇರುತ್ತದೆ... ಪ್ರತಿ ಬಾರಿ ಯೋಚಿಸಿದಾಗಲೂ ಹೊಸ ಹೊಳಹನ್ನು ನೀಡುತ್ತಲೇ ಇರುತ್ತದೆ. ಬಹುಷಃ ಜೀವನ ಪೂರ್ತಿ ಇದರಿಂದ ನಾನು ತಪ್ಪಿಸಿಕೊಳ್ಳಲಾಗುವುದೇ ಇಲ್ಲ ಅನಿಸುತ್ತದೆ!!

ಸಿಂಧು,
ಮೊಪಾಸನನ್ನು ನೆನಪಿಸಿ, ಮತ್ತೆ ಅವನನ್ನು ಓದುವ ಹುಚ್ಚಿಗೆ ಸಿಲುಕಿಸಿದ್ದಕ್ಕೆ ಸಂತಸವಾಗುತ್ತಿದೆ!! ಥ್ಯಾಂಕ್ಸ್!!
ವಾವ್!! ನಿಮ್ಮ ಈ ಕಲ್ಪನೆಗಳು ನನಗೆ ಹೊಳದೇ ಇರಲಿಲ್ಲ.. ನಿಜ ಇಂತವುಗಳು ಇದ್ದರೆ ಕಥೆ ಇನ್ನಷ್ಟು ಆದ್ರಗೊಂಡೆ ಮನದ ಒರಟು ಗೋಡೆ ಅಂಟಿ ಬಿಡುತ್ತದೆ. ಎಲೆಯುದುರಿ ಮಸುಕಾದ ದಾರಿ, ಮಳೆ ಸುರಿಯಬಹುದೆನ್ನುವ ಆಗಸ ಎಲ್ಲವೂ ಮನಸ್ಸನ್ನು ಇನ್ನಷ್ಟು ಒದ್ದೆ ಮಾಡುತ್ತವೆ.. ಮತ್ತೆ ಧನ್ಯವಾದಗಳು, ಇಂತಹ ಒಂದು ಒಳ್ಳೆಯ ಪಾಠ ಹೇಳಿದ್ದಕ್ಕೆ..!!
ಗದ್ಯವನ್ನು ಪಳಗಿಸಬೇಕೆಂದಿರುವ ನನಗೆ ಇದು ನಿಜಕ್ಕೂ ಒಂದು ಸುಂದರ ಹಾದಿ ತೆರೆದಂತೆ ಆಯಿತು!! ಈ ವಿಷಯದಲ್ಲಿ ನೀವು ನನ್ನ ಮೆಂಟರ್ ಆಗಬಹುದೇ!?

ಮನಸ್ವಿನಿ,
ಹೌದು, ಮಾತುಗಳು ಹೇಳಲಾಗದೇ ಇದ್ದಾಗ ಆ ಕೆಲಸವನ್ನು ಮೌನಕ್ಕೆ ಬಿಡಬೇಕು!! ನಿನ್ನ ಬಾಯನ್ನೇ ಮುಚ್ಚುವಷ್ಟು ಪರಿಣಾಮಕಾರಿಯಾಗಿತ್ತ!!?? ;)

Anonymous said...

super agi ide story.

Sam said...

enu helali?????....ninge gottaagutte....iste helthini...muttithu manasige

Anonymous said...

hmm ellO kaLedu hoda haage annisatte....maatu baruttilla...... kone saalina varege barovarege idu ondu saadaaraNa kathe annistittu.......tumbaa oLLe kathe kottiddake thanks maarraayare..

ಸಿಂಧು sindhu said...

ಭಾವಜೀವಿ,

ನನಗೆ ಆ ಕಲ್ಪನೆಗಳು ಹೊಳೆದಿದ್ದು ನೀವು ಬರೆದಿಟ್ಟ ಆ ಸುಂದರ ಕತೆ ಓದಿದಾಗಲೇ.! ಆ ಕಲ್ಪನೆಗಳ ಅಲೆಯೆಬ್ಬಿಸಿದ್ದಕ್ಕೆ ನಿಮಗೆ ಧನ್ಯವಾದ ಹೇಳಬೇಕು ನಾನು.

ಪಾಠ ಹೇಳುವುದು ಮತ್ತು ಮೆಂಟರ್, ಇದು ತುಂಬ ಸಂಕೀರ್ಣ ವಿಷಯ. ನಾನು ಇದಕ್ಕೆ ಸಲ್ಲ. ನಾನು ನಿಮ್ಮ ಭಾವಯಾನದ ಸಹಪಯಣಿಗಳು ಮತ್ತು ಗೆಳತಿ. ನಮ್ಮ ಸುತ್ತಲ ವಿಷಯಗಳನ್ನು ಗ್ರಹಿಸುವ ಸೂಕ್ಷತೆ ಮತ್ತು ಅವನ್ನು ಅಭಿವ್ಯಕ್ತಿಸುವ ಭಾವುಕತೆ ಎರಡೂ ನಿಮಗಿವೆ.

ಬರಹ, ಬರೆಯುತ್ತ ಹೋದಂತೆ ಒಲಿಯುವ ದೇವತೆ. ಅದನ್ನು ಪಳಗಿಸುವ ಮಾತು ಯಾಕೋ ಸರಿಯೆನ್ನಿಸುವುದಿಲ್ಲ. ಒಲಿಸಿಕೊಳ್ಳಿ. ಒಲಿಯುತ್ತಾಳೆ.

ನಿಮ್ಮ ಸಂಜೆಯ ರಾಗದ ರಂಗುಗಳು ನನಗೆ ಇಷ್ಟ.

ಭಾವಜೀವಿ... said...

ಸಿಂಧು,
ಧನ್ಯವಾದಗಳು ಇನ್ನೊಮ್ಮೆ, ನನ್ನ ಉತ್ತರಕ್ಕೆ ಮಾರುತ್ತರ ನೀಡಿದ್ದಕ್ಕೆ..!! ನಿಜವಾಗ್ಲು ನೀವಂದದ್ದು ಸತ್ಯ, ಬರವಣಿಗೆ ಒಬ್ಬಳು ಕಿನ್ನರಿ, ದೇವತೆ, ಅವಳನ್ನು ಒಲಿಸಿಕೊಳ್ಳಲು ಮಾತ್ರ ಸಾಧ್ಯ. ನಾನು ನಿಮ್ಮಿಂದ ಹೆಚ್ಚಿನದೇನನ್ನು ಬಯಸುವುದಿಲ್ಲ, ಹೀಗೆ ತಪ್ಪಿದಾಗ ತಿದ್ದುವ, ತಪ್ಪು ಒಪ್ಪುಗಳನ್ನು ತೋರಿಸಿ ಸರಿಪಡಿಸಸುವ ಕಷ್ಟ ತೆಗೆದುಕೊಂಡರೆ ಸಾಕು!! ಅದಕ್ಕಿಂತ ದೊಡ್ದದು ಇನ್ನೇನಿದೆ!

ನಿಜ ಹೇಳಬೇಕೆಂದರೆ, ನಿಮ್ಮ ಹೆಚ್ಚಿನ ಬರಹಗಳನ್ನು ಓದುವಾಗ ಹಾಗೂ ಓದಿದ ಬಹಳ ಹೊತ್ತಿನ ನಂತರವೂ ಮನದಲ್ಲಿ ಗುಂಗು ಉಳಿಸಿಹೋಗುತ್ತದೆ, ಸದಾ ಕಾಡುತ್ತಲೇ ಇರುತ್ತದೆ.. ಹೆಚ್ಚಿನ ಆಲೋಚನೆಗೆ ಹಚ್ಚುತ್ತವೆ.. ಅದನ್ನು ನೋಡಿಯೇ ನನಗನ್ನಿಸಿದ್ದು, ನಾನು ಗದ್ಯವನ್ನು ಪ್ರಯತ್ನಿಸಬೇಕು!!
ಜೊತೆಯಲ್ಲಿಯೇ ಇದ್ದು, ಹೀಗೆ ತಿದ್ದಿ ತೀಡುತ್ತಿರಿ, ನಿಮ್ಮ ಕಾರಣದಿಂದ ಇನ್ನಷ್ಟು ಹೊಳೆಯಲಿ ನನ್ನೊಳಿಗಿನ ಬರೆಯುವ ಚಿಲುಮೆ!!

Unknown said...

ತುಂಬಾ ಚಂದದ ಕಥೆ....... ಹೇಗೆ ಸ್ಪಂದಿಸಬೇಕು ಅಂತಾನೆ ಗೊತ್ತಾಗುತ್ತಿಲ್ಲ...... ಕಥೆಯ ಮುಕ್ತಾಯ ಚೆನ್ನಾಗಿದೆ....

Sudha Bhat said...

chennagide, duss kahaniyaan movienalli ee kathe holuva ondu kate ide, neevu nodillavadare nodi,
ista aagabahudu
http://www.youtube.com/watch?v=gA8iOgspEqk&feature=related